Languages

ಪಾಠ 8

ಬೈಬಲ್ ಅನ್ನು ದೇವರ ವಾಕ್ಯ ಎಂದು ಕರೆಯಲಾಗುತ್ತದೆ ಏಕೆಂದರೆ ಅದು ದೇವರು ಯಾರು, ನಾವು ಯಾರು, ಎಲ್ಲಿಂದ ಬಂದಿದ್ದೇವೆ ಮತ್ತು ಏಕೆ ಅಸ್ತಿತ್ವದಲ್ಲಿದ್ದೇವೆ ಎಂಬುದನ್ನು ವಿವರಿಸುವ ದೇವರ ಮಾರ್ಗವಾಗಿದೆ. ಇದು ಸಂಕೀರ್ಣ. ನಾವು ನಮ್ಮ ಬೈಬಲ್‌ಗಳನ್ನು ತೆರದು ಎಲ್ಲೋ ಮಧ್ಯದಿಂದ ಓದಲು ಪ್ರಾರಂಭಿಸಿದರೆ, ನಮಗೆ ಬಹುಶಃ ಗೊಂದಲವಾಗಬಹುದು. ಏಕೆಂದರೆ ಬೈಬಲ್ ವಾಸ್ತವವಾಗಿ ಸುಮಾರು 2,000 ವರ್ಷಗಳ ಅವಧಿಯಲ್ಲಿ ವಿವಿಧ ಲೇಖಕರು ಬರೆದ 66 ಪ್ರತ್ಯೇಕ ಪುಸ್ತಕಗಳು.

ಬೈಬಲ್‌ನ ಪುಸ್ತಕಗಳು ದೇವರಿಂದ ಪ್ರೇರಿತವಾದವು. ಅಷ್ಟೇ ಅಲ್ಲದೆ, ಪುಸ್ತಕದಲ್ಲಿರುವ ವಿಷಯಗಳು ಸತ್ಯವೆಂದೂ ಮತ್ತು ಅವು ಆತನಿಂದಲೇ ಬಂದವೆಂದೂ ದೇವರು ದೃಢಪಡಿಸಿಸುತ್ತಾನೆ. ಅನೇಕ ಪುಸ್ತಕಗಳನ್ನು ನಿರ್ದಿಷ್ಟ ಜನರ ಗುಂಪುಗಳಿಗೆ ಉದ್ದೇಶಿಸಲಾಗಿದೆ. ಆರಂಭಿಕ ಚರ್ಚ್ ಈ ಪುಸ್ತಕಗಳನ್ನು ಸಂಗ್ರಹಿಸಿ ಒಂದೇ ಸಂಪುಟದಲ್ಲಿ ಜೋಡಿಸಿತು, ನಾವು ಈಗ ಅದನ್ನು ಬೈಬಲ್ ಎಂದು ಕರೆಯುತ್ತೇವೆ. ಒಟ್ಟಾಗಿ, ಇತಿಹಾಸದುದ್ದಕ್ಕೂ ದೇವರು ಮನುಷ್ಯನೊಂದಿಗೆ ಹೇಗೆ ಸಂವಹನ ನಡೆಸಿದ್ದಾನೆ ಎಂಬುದನ್ನು ಅದು ತೋರಿಸುತ್ತದೆ.

ಬೈಬಲ್‌ನ ಪುಸ್ತಕಗಳನ್ನು ವಿವಿಧ ಪ್ರಕಾರಗಳಲ್ಲಿ ಬರೆಯಲಾಗಿದೆ. ಉದಾಹರಣೆಗೆ, ಕೀರ್ತನೆಗಳ ಪುಸ್ತಕವು ಹಾಡುಗಳು ಮತ್ತು ಪ್ರಾರ್ಥನೆಗಳ ಪುಸ್ತಕವಾಗಿದೆ. ಇದು ರೂಪಕಗಳಿಂದ ತುಂಬಿರುವುದರಿಂದ ಇದನ್ನು ಅಕ್ಷರಶಃ ತೆಗೆದುಕೊಳ್ಳಬಾರದು. ಮತ್ತು ಯೊವಾನ್ನನ ಶುಭಸಂದೇಶವು ಯೇಸುವಿನ ಜೀವನವನ್ನು ಆಧರಿಸಿದ ಐತಿಹಾಸಿಕ ಕೃತಿಯಾಗಿದೆ.

ಗಲಾತ್ಯರಿಗೆ ಮತ್ತು ಎಫೆಸಿಯರಿಗೆ ಬರೆದ ಕೆಲವು ಪತ್ರಗಳು, ಆರಂಭಿಕ ಚರ್ಚ್ ನಾಯಕರು ನಿರ್ದಿಷ್ಟ ಜನರ ಗುಂಪುಗಳಿಗೆ ಬರೆದ ಪತ್ರಗಳಾಗಿವೆ.

ಕೆಲವು ಭವಿಷ್ಯಜ್ಞಾನದ ಪುಸ್ತಕಗಳಿವೆ, ಉದಾಹರಣೆಗೆ ಯೆಶಾಯ ಮತ್ತು ಪ್ರಕಟನೆಯ ಪುಸ್ತಕಗಳು - ಇದು ಮೂಲತಃ ಆರಂಭಿಕ ಕ್ರೈಸ್ತ ಚರ್ಚ್‌ಗಾಗಿ ಬರೆಯಲಾದ ದೀರ್ಘವಾದ, ಸಂಕೀರ್ಣವಾದ ಭವಿಷ್ಯವಾಣಿಯನ್ನು ಹೊಂದಿದೆ.

ಇನ್ನೂ ಹೆಚ್ಚಿನವುಗಳಿವೆ, ಆದರೆ ನಿಮಗೆ ವಿಷಯ ಅರ್ಥವಾಯಿತು.

ಬೈಬಲ್ ಅನ್ನು ಎರಡು ಒಡಂಬಡಿಕೆಗಳಾಗಿ ಸಹ ವಿಂಗಡಿಸಲಾಗಿದೆ. ಹಳೆಯ ಒಡಂಬಡಿಕೆಯು ಯೇಸುವಿನ ಜನನದ ಮೊದಲು ಬರೆದ ಪುಸ್ತಕಗಳಿಂದ ಮಾಡಲ್ಪಟ್ಟಿದೆ ಮತ್ತು ಹೊಸ ಒಡಂಬಡಿಕೆಯು ಯೇಸುವಿನ ಜನನದ ನಂತರ ಬರೆದ ಪುಸ್ತಕಗಳನ್ನು ಒಳಗೊಂಡಿದೆ.

ಬೈಬಲ್‌ನ ಮೊದಲ ಐದು ಪುಸ್ತಕಗಳನ್ನು (ಪಂಚಶಾಸ್ತ್ರ) ಇಸ್ರಯೇಲ್‌ನ ಜನರು ಇಸ್ರಯೇಲ್‌ನ ಜನರಿಗಾಗಿ ಬರೆದಿದ್ದು, ಇವುಗಳಲ್ಲಿ ಪ್ರಪಂಚದ ಆರಂಭವನ್ನು, ಅವರಿಗಾಗಿ ದೇವರ ವಾಗ್ದಾನಗಳನ್ನು ಮತ್ತು ಆತನು ಹೇಗೆ ಅವರನ್ನು ಒಂದು ರಾಷ್ಟ್ರವಾಗಿ ರೂಪಿಸಿದನು ಎಂಬುದನ್ನು ವಿವರಿಸಲಾಗಿದೆ.

ಬೈಬಲ್‌ನಾದ್ಯಂತ ದೇವರು ಮತ್ತು ಜನರ ನಡುವಿನ ವಿಭಿನ್ನ ಒಪ್ಪಂದಗಳಿವೆ. ಇವುಗಳನ್ನು ವಾಗ್ದಾನಗಳು ಎಂದು ಕರೆಯಲಾಗುತ್ತದೆ. ಇಂದು ನಾವು ಯೇಸುವಿನ ವಾಗ್ದಾನಗಳ ಅಸರೆಯಲ್ಲಿ ಜೀವಿಸುತ್ತೇವೆ. ಅಂದರೆ ಯಹೂದಿ ಜನರೊಂದಿಗೆ ದೇವರ ಹಳೆಯ ವಾಗ್ದಾನಗಳಲ್ಲಿ ಒಂದಾದ ಯಾಜಕಕಾಂಡ ಅಥವಾ ಧರ್ಮೋಪದೇಶಕಾಂಡ ಪುಸ್ತಕಗಳಲ್ಲಿ ವಿವರಿಸಲಾದ ವಿಧ್ಯುಕ್ತ ಕಾನೂನುಗಳನ್ನು ನಾವು ಅನುಸರಿಸಬೇಕಾಗಿಲ್ಲ. ವಿಧ್ಯುಕ್ತ ಕಾನೂನುಗಳು ಯೇಸುವನ್ನು ಸೂಚಿಸುವ ಸಂಕೇತಗಳಾಗಿ ಕೆಲಸ ಮಾಡುತ್ತವೆ, ಹಾಗಾಗಿ ವಿಧ್ಯುಕ್ತ ಕಾನೂನುಗಳು ಆತನ ಜೀವನ ಮತ್ತು ಮರಣದೊಂದಿಗೆ ಪೂರ್ಣಗೊಂಡವು.

ನಿಮ್ಮ ತಲೆ ತಿರುಗುತ್ತಿದ್ದರೆ, ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ದೀರ್ಘವಾಗಿ ಉಸಿರಾಡಿ. ನಂತರ ಪ್ರೋತ್ಸಾಹ ಪಡೆಯಿರಿ ಏಕೆಂದರೆ ನೀವು ಈಗಲೇ ಎಲ್ಲವನ್ನೂ ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ!

ಬೈಬಲ್ ನೀವು ಕರ್ತವ್ಯವಾಗಿ ಓದಬೇಕಾದ ಪುಸ್ತಕವಲ್ಲ. ಇದು ನಿಮಗೆ ಓದಲು ಸಿಕ್ಕಿರುವುದು ನಿಮ್ಮ ಪುಣ್ಯ. ಇದನ್ನು ಓದುವುದು, ಅಧ್ಯಯನ ಮಾಡುವುದು ಮತ್ತು ಆಜೀವನ ಪಾಲಿಸುವುದು ಒಂದು ಸಂತೋಷದ ವಿಷಯ. ಇದು ನಿಮ್ಮ ಮನಸ್ಸು ಮತ್ತು ಹೃದಯವನ್ನು ಪರಿವರ್ತಿಸುವ ನಿಧಿಯಾಗಿದೆ.

ಬೈಬಲ್‌ನ ಕೆಲವು ವಿಭಾಗಗಳನ್ನು ಅರ್ಥಮಾಡಿಕೊಳ್ಳುವುದು ಇತರವಕ್ಕಿಂತ ಹೆಚ್ಚು ಸುಲಭ. ಆದಿಕಾಂಡದ ಪುಸ್ತಕವನ್ನು (ಬೈಬಲ್‌ನ ಮೊದಲ ಪುಸ್ತಕ) ಮತ್ತು ಕನಿಷ್ಠ ಈ ನಾಲ್ಕು ಶುಭಸಂದೇಶಗಳಲ್ಲಿ (ಮತ್ತಾಯ, ಮಾರ್ಕ, ಲೂಕ ಅಥವಾ ಯೊವಾನ್ನ) ಒಂದನ್ನು ಓದುವ ಮೂಲಕ ಪ್ರಾರಂಭಿಸಲು ನಾವು ನಿಮಗೆ ಸಲಹೆ ನೀಡುತ್ತೇವೆ.

ಅಲ್ಲಿಂದ, ಅಪೋಸ್ತಲರ ಕೃತ್ಯಗಳು ಪುಸ್ತಕ ಮತ್ತು ಹೊಸ ಒಡಂಬಡಿಕೆಯಲ್ಲಿನ ಪತ್ರಗಳ ಜೊತೆಗೆ ವಿಮೋಚನಕಾಂಡವನ್ನು ಓದುವುದು ಹೆಚ್ಚು ಅರ್ಥಪೂರ್ಣವೆನಿಸಬಹುದು.

ರೋಮನರಿಗೆ ಮತ್ತು ಹಿಬ್ರಿಯರಿಗೆ ಓದಲು ಕಷ್ಟಕರವಾದ ಎರಡು ಪುಸ್ತಕಗಳಾಗಿವೆ, ಆದರೂ ಅವು ಯೇಸುವಿನ ಹೊಸ ವಾಗ್ದಾನಗಳು ಮತ್ತು ಹಳೆಯ ಒಡಂಬಡಿಕೆಯಲ್ಲಿನ ಹಳೆಯ ವಾಗ್ದಾನಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

ಬೈಬಲ್‌ನಲ್ಲಿ ಅನೇಕ ಆಕರ್ಷಕ ಕಥೆಗಳಿವೆ. ಯಹೂದಿ ಜನರಿಗಾಗಿ ವಿವರವಾದ ವಂಶಾವಳಿಗಳು ಮತ್ತು ಸಂಕೀರ್ಣ ಕಾನೂನುಗಳ ವಿಭಾಗಗಳೂ ಇವೆ. ಆದರೂ, ಬೈಬಲ್‌ನ ಪ್ರತಿಯೊಂದು ಭಾಗವು ಒಳ್ಳೆಯ ಉದ್ದೇಶವನ್ನು ಹೊಂದಿದೆ ಮತ್ತು ಅಧ್ಯಯನ ಮಾಡಲು ಯೋಗ್ಯವಾಗಿದೆ ಎಂದು ನೀವು ಖಚಿತವಾಗಿರಬಹುದು ಏಕೆಂದರೆ ನಾವು ಯಾರು, ಆತನು ಯಾರು ಮತ್ತು ನಾವು ಹೇಗೆ ಬದುಕಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಬೈಬಲ್ ನಮಗೆ ಸಹಾಯ ಮಾಡುತ್ತದೆ. ಅದು ನಮ್ಮನ್ನು ದುಷ್ಟತನದಿಂದ ದೂರವಿಡುತ್ತದೆ. ಹಾಗಾಗಿಯೇ, ನೀವು ಬೈಬಲ್ ಅನ್ನು ಓದದಂತೆ ನಿರಂತರವಾಗಿ ತಡೆಯುವ ನಿಮ್ಮ ಫೋನ್, ವಿಡಿಯೋ ಗೇಮ್‌ಗಳು, ಇತ್ಯಾದಿ ಎಲ್ಲದರ ಬಗ್ಗೆಯೂ ನೀವು ಎಚ್ಚರದಿಂದಿರಬೇಕು.

ನಿಮ್ಮ ಬಳಿ ಬೈಬಲ್ ಇಲ್ಲದಿದ್ದರೆ, ನೀವು ಒಂದನ್ನು ಪಡೆಯಬೇಕು.

ಒಂದು ವರ್ಷದಲ್ಲಿ ಇಡೀ ಬೈಬಲನ್ನು ಓದುವ ಕೆಲವು ಯೋಜನೆಗಳಿವೆ ಮತ್ತು ಇವುಗಳು ನಾವು ಪ್ರತಿದಿನ ಚಿಕ್ಕ ಭಾಗಗಳನ್ನು ಓದುವಂತೆ ಮಾಡುವುದರಿಂದ ತುಂಬಾ ಸಹಾಯಕವಾಗಿವೆ.

ನೀವು ಹೆಚ್ಚು ಓದಲು ಬಯಸಿದರೆ, ಖಂಡಿತ ಓದಿರಿ. ಆದರೆ ದೇವರ ವಾಕ್ಯವನ್ನು ಸವಿಯಲು ಕಲಿಯುವುದರ ಮೇಲೆ ಕೇಂದ್ರೀಕರಿಸುವುದು ಒಳ್ಳೆಯದು. ಇದು ಪ್ರೋತ್ಸಾಹ ಮತ್ತು ಬುದ್ಧಿವಂತಿಕೆಯ ನಿರಂತರ ಮೂಲವಾಗಿದೆ. ಕ್ರೈಸ್ತ ಜೀವನವನ್ನು ನಡೆಸಲು ನಿಮ್ಮ ಸಾಮರ್ಥ್ಯವು ನಿಮ್ಮ ಹೃದಯ ಮತ್ತು ಮನಸ್ಸಿನಲ್ಲಿ ನೀವು ಎಷ್ಟು ಸ್ಥಿರವಾಗಿ ಬೈಬಲ್ ಅನ್ನು ತೊಡಗಿಸಿಕೊಳ್ಳುತ್ತೀರಿ ಎಂಬುದಕ್ಕೆ ನೇರವಾಗಿ ಸಂಬಂಧಿಸಿದೆ.

ಬೈಬಲ್ ಅನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವಂತೆ ದೇವರನ್ನು ಕೇಳಿ. ನಿಮ್ಮ ದೈನಂದಿನ ಜೀವನದಲ್ಲಿ ಆತನ ಆಜ್ಞೆಗಳನ್ನು ಅನ್ವಯಿಸಲು ನಿಮಗೆ ಸಹಾಯ ಮಾಡುವಂತೆ ಆತನನ್ನು ಕೇಳಿ. ಅದನ್ನು ಓದುವುದನ್ನು ಮತ್ತು ಕೇಳುವುದನ್ನು ನಿರ್ಲಕ್ಷಿಸಬೇಡಿ. ನೀವು ಅದನ್ನು ಮರೆಯುವಂತೆ ಆಗಲು ಬಿಡಬೇಡಿ. ನೀವು ಓದುಗರೆಂದು ನೀವು ಭಾವಿಸದಿರಬಹುದು, ಆದರೆ ಬೈಬಲ್ ಬಹಳ ಬೇಗ ನಿಮ್ಮ ಅತ್ಯಂತ ಅಮೂಲ್ಯವಾದ ಆಸ್ತಿಯಾಗುತ್ತದೆ ಏಕೆಂದರೆ ಅದು ನಿಮಗಾಗಿ ದೇವರ ವಾಕ್ಯಗಳು.

ಇನ್ನಷ್ಟು ತಿಳಿಯಿರಿ

ಒಂದು ಬೈಬಲ್ ಅನ್ನು ಪಡೆಯಿರಿ, "ಒಂದು ವರ್ಷದಲ್ಲಿ ಬೈಬಲ್ ಅನ್ನು ಓದಿ" ಯೋಜನೆಯನ್ನು ಹುಡುಕಿ ಮತ್ತು ಆ ಓದುವ ಯೋಜನೆಯನ್ನು ಅನುಸರಿಸಲು ಪ್ರಾರಂಭಿಸಿ.

ಹಿಂದಿನದು List List ಮುಂದಿನದು